ಕಪೋತವಾಕ್ಯ : ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಒಂದು ನೀತಿ ಕಥೆ. ಈ ವ್ಯಾಧ-ಕಪೋತೋಪಾಖ್ಯಾನದಲ್ಲಿ ಮುಚುಕುಂದನನ್ನು ಕುರಿತು ಭಾರ್ಗವ ಹೇಳಿದ ಅತಿಥಿಸತ್ಕಾರದ ಹಿರಿಮೆಯ ವರ್ಣನೆ ಇದೆ.

ಒಂದು ಮಹಾರಣ್ಯದಲ್ಲಿ ಒಬ್ಬ ಕ್ರೂರಿಯಾದ ಬೇಡರವನು ಬೇಟೆಯಾಡಲು ಸಂಚಾರ ಮಾಡುತ್ತಿರುವಾಗ ಭಯಂಕರವಾದ ಮಹಾವೃಷ್ಟಿಯಾಗಿ ಎಡೆಬಿಡದೆ ಧಾರಾಕಾರವಾಗಿ ಮಳೆ ಹುಯ್ದು ಅಸಾಧ್ಯವಾದ ಚಳಿ ಉಂಟಾಯಿತು. ಮರೆಯಾದ ಒಂದು ಆಸರೆಯೂ ಸಿಕ್ಕದೆ ಒದ್ದಾಡುತ್ತ ಕಳವಳಗೊಂಡ ವ್ಯಾಧ ಒಂದು ಮರದಡಿಗೆ ಬಂದು ಅಲ್ಲಿ ವಾಸಿಸಬೇಕೆಂದು ನಿಶ್ಚಯಿಸಿ ಅಲ್ಲಿಯ ವನದೇವತೆಗೆ ನಮಸ್ಕರಿಸಿ ತನ್ನನ್ನು ಆ ಕಷ್ಟದಿಂದ ಪಾರು ಮಾಡಬೇಕೆಂದು ಪ್ರಾರ್ಥಿಸಿ ಒಂದು ಶಿಲೆಯ ಮೇಲೆ ತಲೆಯನ್ನಿಟ್ಟುಕೊಂಡು ಎಲೆ ಹಾಸಿಗೆಯ ಮೇಲೆ ಮಹತ್ತರ ದುಃಖದೊಡನೆ ಮಲಗಿದ. ಅದೇ ಮರದ ಕೊಂಬೆಯೊಂದರಲ್ಲಿ ಒಂದು ಕಪೋತ ಅನೇಕ ಗೆಳೆಯ ಪಕ್ಷಿಗಳೊಡನೆ ವಾಸವಾಗಿತ್ತು. ಅದರ ಮಡದಿ ಕಪೋತಿ ಬೆಳಗ್ಗೆ ಆಹಾರಕ್ಕೋಸ್ಕರ ಹೊರಕ್ಕೆ ಹೋದುದು ಅಲ್ಲಿಯವರೆವಿಗೂ ಗೂಡಿಗೆ ಬರದೇ ಇದ್ದುದನ್ನು ಕಂಡು ಗಂಡು ಹಕ್ಕಿ ಬಹಳಮಟ್ಟಿಗೆ ನೊಂದು ಹೆಂಡತಿಯ ಅಗಲಿಕೆಯ ದುಃಖವನ್ನು ತೋಡಿಕೊಳ್ಳುತ್ತಿತ್ತು. ಇತ್ತ ಮರದ ಕೆಳಗೆ ಮಲಗಿದ್ದ ಬೇಡರವನ ಬುಟ್ಟಿಯಲ್ಲಿ ಸಿಕ್ಕಿಬಿದ್ದಿದ್ದ ಕಪೋತಿ ತನ್ನ ಪತಿಯ ಮಾತುಗಳನ್ನು ಕೇಳಿ ಪ್ರತ್ಯಕ್ಷ ಪರೋಕ್ಷಗಳಲ್ಲಿ ಏಕರೂಪವಾಗಿ ಪತಿಯಿಂದ ಸ್ತುತಿಸಲ್ಪಡುವ ಸ್ತ್ರೀಯೇ, ಧನ್ಯಳು, ಪತಿಯ ಸಂತೋಷವೇ ಪ್ರಿಯೆಯ ಜೀವನ ಸರ್ವಸ್ವ-ಎಂದು ಹೇಳಿಕೊಂಡು ತನ್ನ ಪತಿಯನ್ನು ಕೂಗಿ ಪ್ರಾಣವಲ್ಲಭನೇ! ನಾವು ಜಾತಿಯಲ್ಲಿ ಕಪೋತಗಳಾದರೂ ಧರ್ಮರಕ್ಷಣಾ ಕಾರ್ಯವನ್ನು ಮರೆಯಬಾರದು. ಆದ್ದರಿಂದ ನಿನ್ನ ಶರೀರಮೋಹವನ್ನು ತೊರೆದು ಮನೆಬಾಗಿಲಿಗೆ ಬಂದಿರುವ ಅತಿಥಿಯ ಪುಜೆಯನ್ನು ಯತ್ನಪುರ್ವಕವಾಗಿ ಮಾಡು. ಈ ದೇಹ ಸ್ಥಿರವಲ್ಲ. ಧರ್ಮ ಶಾಶ್ವತಫಲ ಕೊಡುವುದು-ಎಂದು ಹೇಳಲಾಗಿ, ಆ ಮಾತನ್ನು ಕೇಳಿ ಹರ್ಷಗೊಂಡ ಕಪೋತ ಬೇಡರವನನ್ನು ಕಂಡು ಶಾಸ್ತ್ರೀಯ ವಿಧಾನದಿಂದ ಮನಃಪುರ್ವಕವಾದ ಸ್ವಾಗತವನ್ನು ಬಂiÀÄಸಿ ಅವನನ್ನು ಪುಜಿಸಿತು. ಅವನ ಇಚ್ಛೆಯಂತೆ ಒಣ ಎಲೆಗಳ ಹಾಸಿಗೆಯನ್ನು ಮಾಡಿಕೊಟ್ಟು ಎಲ್ಲಿಂದಲೋ ಉರಿಯುವ ಕೊಳ್ಳಿಯನ್ನು ತಂದು ಕಾಸಿಕೊಳ್ಳಲು ಬೆಂಕಿ ಮಾಡಿಕೊಟ್ಟಿತು. ಬೇಡರವನು ಹಸಿವೆಂದು ಹೇಳಿದಾಗ ಎರಡು ಯೋಚಿಸದೆ ತನ್ನನ್ನೇ ಆಹಾರವಾಗಿ ಉಪಯೋಗಿಸೆಂದು ಬೇಡನಿಗೆ ಹೇಳಿ ಅಗ್ನಿಪ್ರವೇಶ ಮಾಡಿ ಅಸು ನೀಗಿತು. ಈ ಕೊನೆಯ ಭಾಗದಲ್ಲಿ ಅತಿಥಿಸತ್ಕಾರದ ವರ್ಣನೆ, ಉಪದೇಶ ಬರುತ್ತದೆ.

ಕನ್ನಡದಲ್ಲಿ ಬಹಳ ಹಿಂದೆಯೇ ಈ ಕಥೆ ಸಾಂಗತ್ಯರೂಪದಲ್ಲಿ ರಚನೆಗೊಂಡಿದೆ. ಇದರ ಕರ್ತೃ ನಂಜಕವಿ (ಸು.1700). ಸಂಪಿಗೆ ಸಿದ್ದೇಶ್ವರನ ಭಕ್ತ. ಇದರ ರಚನೆ ಬಹು ಸೊಗಸಾಗಿದೆ.

	ಒಂದು ಕಪೋತಿಯು ಸಂದ ಕಪೋತಿಯೊ
	ಳೊಂದು ವನದಿ ಸುಖವಾಗಿ
	ಕಂದನ ಪಡೆದುಕೊಂಡಂದದಲಿರುತಿರೆ
	ಮುಂದೊಂದು ವಿಘ್ನ ಪ್ರಾಪ್ತಿಸಿತು.

ಎಂದು ಮೊದಲಾಗುವ ಈ ಸಾಂಗತ್ಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಸೇರಿತ್ತಾಗಿ ಎಲ್ಲ ಮಕ್ಕಳಿಗೂ ಇದರ ಪರಿಚಯವಿತ್ತು. ನಿರರ್ಗಳವಾದ ಸಾಂಗತ್ಯ ಶೈಲಿಯಲ್ಲಿ ಹಿತಮಿತವಾದ ವಿವರ. ವರ್ಣನೆಗಳೊಂದಿಗೆ ಕವಿ ಇಲ್ಲಿ ಕಥೆ ಹೇಳುತ್ತಾನೆ. ಮೂಲದಂತೆ ನೀತಿಯ ಅತಿರೇಕ ಇಲ್ಲಿ ಕಾಣದು.                            (ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ